Thursday, January 21, 2010

ಫುಕುವೊಕರ ನೈಸರ್ಗಿಕ ಕೃಷಿ ಮತ್ತು ನಮ್ಮ ರೈತರುಫುಕುವೊಕರ ನೈಸರ್ಗಿಕ ಕೃಷಿ ಮತ್ತು ನಮ್ಮ ರೈತರು
ಜೋಮನ್ ವರ್ಗೀಸ್
ಸೋಮವಾರ, 18 ಆಗಸ್ಟ್ 2008ಫುಕುವೊಕ ಕೃಷಿಕ, ಕೃಷಿ ವಿಜ್ಞಾನಿ, ಸಂಶೋಧಕ ಎಲ್ಲವೂ ಆಗಿದ್ದರು. ಕಳೆ ಕೀಳದೆ, ಕೀಟನಾಶಕ ಸಿಂಪಡಿಸದೆ, ಗೊಬ್ಬರ ಹಾಕದೆ, ಭೂಮಿ ಉಳುಮೆ ಮಾಡದೆ ಬೆಳೆಗಳನ್ನು ಬೆಳೆಯುವುದು ಹೇಗೆಂದು ರೈತರಿಗೆ ಹೇಳಿಕೊಟ್ಟವರು. ಹಾಗೆ ಹೇಳಿಕೊಡುತ್ತಲೇ ಬೆಳೆಯೊಂದಿಗೆ, ಮಣ್ಣಿನ ಅಂತಃಸತ್ವವನ್ನೂ ಅದರೆಡೆಗಿರಬೇಕಾದ ಕಾಳಜಿಯನ್ನೂ ಪ್ರೀತಿಯಿಂದ ಕಲಿಸಿದವರು. ಇಂದು ಜಗತ್ತಿನ ಹಲವು ದೇಶಗಳು ಫುಕುವೊಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿವೆ. ತುಂಡು ಭೂಮಿಯಲ್ಲೇ ಕಡಿಮೆ ಬಂಡವಾಳದಲ್ಲಿ ಬೆಳೆ ಬೆಳೆದು ಆರ್ಥಿಕ ಸ್ವಾವಲಂಬನೆ ಗಳಿಸುವುದನ್ನು ರೈತರಿಗೆ ಕಲಿಸಿಕೊಡಲಾಗುತ್ತಿದೆ. ಭಾರತದ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಪ್ರಾಯೋಗಿಕವಾಗಿ ಜಾರಿಗೊಂಡು ಯಶಸ್ಸು ಕಂಡಿದೆ.

ಫುಕುವೊಕ ಅಭಿವೃದ್ಧಿ ಪಡಿಸಿದ ನ್ಯಾಚುರಲ್ ಫಾರ್ಮಿಂಗ್ ಜಪಾನಿನಲ್ಲಿ 1940ರಿಂದಲೇ ಜಾರಿಯಲ್ಲಿತ್ತಾದರೂ, ಅದು ಹೆಚ್ಚು ಜನಪ್ರಿಯಗೊಂಡದ್ದು ಕಳೆದೆರಡು ದಶಕಗಳಿಂದ. ನೈಸರ್ಗಿಕ ಕೃಷಿಯ ಅಗತ್ಯತೆ ಮತ್ತು ಅನಿವಾರ್ಯತೆ ಬಗ್ಗೆ ನಮ್ಮ ರೈತರು ಗಂಭೀರವಾಗಿ ಚಿಂತಿಸಲಾರಂಭಿಸಿದ್ದು, ಹಾಗೂ ಅಂತಹ ಪ್ರಯೋಗಗಳಿಗೆ ಮರಳಿ ಒಲವು ತೋರಿಸಿದ್ದೂ ಈಚಿನ ವರ್ಷಗಳಲ್ಲಿ. ಹಾಗೆ ನೋಡಿದರೆ ಯೂರಿಯಾ, ಪೊಟಾಷ್‌ನಂತ ರಸಾಯನಿಕಗಳು ನಮ್ಮ ಮಣ್ಣಿನ ಕಣಕಣವನ್ನೂ ಸೇರಿ, ಅದು ನಾವು ಸೇವಿಸುವ ಆಹಾರದ ಮೂಲಕ ದೇಹಕ್ಕೂ ವಿಷ ಉಣಬಡಿಸುತ್ತಿರುವ ಈ ಹೊತ್ತಲ್ಲಿ ಆದರೂ, ಇಂತಹ ಪರ್ಯಾಯ ಕೃಷಿ ಪದ್ಧತಿಗಳ ಬಗ್ಗೆ ಚಿಂತಿಸಬೇಕಾಗಿದೆ. ಆದರೆ ನಮ್ಮಲ್ಲಿ ಇಂತಹ ಬದಲಾವಣೆಗಳು ಕಾಣಿಸಿಕೊಳ್ಳಲು ಗೊಬ್ಬರ ಅಭಾವದಂತ ಸಮಸ್ಯೆಗಳು ಕಾಣಿಸಿಕೊಳ್ಳಬೇಕಿದೆ. ಎಂಥ ವಿಪರ್ಯಾಸ.

ಫುಕುವೊಕ ಅವರ ನೈಸರ್ಗಿಕ ಕೃಷಿ ಹಾಗೂ ಈಗಿರುವ ಸಾವಯವ ಕೃಷಿ ನಡುವೆ ಕೆಲವು ಸಾಮ್ಯತೆಗಳು ಹಾಗೂ ಕೆಲವು ಸೂಕ್ಷ್ಮ ವ್ಯತ್ಯಾಸಗಳೂ ಇವೆ. ಆದ್ದರಿಂದಲೇ ಇದರ ಬಗ್ಗೆ ಕೃಷಿ ವಲಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳೂ ಇವೆ. ಇದು ಏನೇ ಇದ್ದರೂ ಇವೆರಡೂ ಪರಿಸರ ಸ್ನೇಹಿ ಕೃಷಿ ಪದ್ಧತಿಗಳು. ವಿಚಿತ್ರವೆಂದರೇ ಗೊಬ್ಬರ ಸಮಸ್ಯೆ, ಕೃಷಿ ಸಬ್ಸಿಡಿ ಅಂತೆಲ್ಲಾ ಹೋರಾಟಕ್ಕಿಳಿಯುವ ನಮ್ಮ ರೈತರು ಅವರ ಹೆಸರಿಗಿರುವ ಸಂಘಟನೆಗಳು ಇಂತಹ ನೈಸರ್ಗಿಕ ಕೃಷಿ ಪದ್ಧತಿಗಳ ಅನುಷ್ಠಾನದ ಆಸಕ್ತಿ ವಹಿಸುವುದಿಲ್ಲ. ವಿಶೇಷ ಆರ್ಥಿಕ ವಲಯಗಳನ್ನು ಸೃಷಿಸುವುದರಲ್ಲಿ ಬಿಡುವಿಲ್ಲದಿರುವ ಸರಕಾರ ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಗೊಬ್ಬರ ಸುರಿದೂ ಸುರಿದೂ, ಗೊಬ್ಬರ ಹಾಕದೆ ಕಳೆ ಕೂಡ ಹುಟ್ಟದಂತ ಪರಿಸ್ಥಿತಿ ನಿರ್ಮಾಣವಾಗಿರುವ ನಮ್ಮ ಭೂಮಿಗಳಲ್ಲಿ ನೈಸರ್ಗಿಕ ಕೃಷಿ ಯಶಸ್ವಿಯಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ರೈತರಿಗೆ ಈ ಮಹತ್ವವನ್ನು ತಿಳಿಸಿ ಹೇಳುವರು ಯಾರು?

ಸಂತೆಗಳಲ್ಲಿ ಅಕ್ಷರಸ್ಥ ಜನ ನೈಸರ್ಗಿಕ ಕೃಷಿಯ ಮಹತ್ವದ ಬಗ್ಗೆ ಮಾತನಾಡಿಕೊಳ್ಳುತ್ತಾ, ನೈಸರ್ಗಿಕವಾಗಿ ಬೆಳೆಯಲಾದ ಜವಾರಿ ತರಕಾರಿಗಳನ್ನು ಆಯ್ದು ಕೊಳ್ಳುತ್ತಾರೆ. ಅಂತಾರಾಷ್ಟ್ರೀಯ ಕಂಪನಿಗಳಿಗೆ ಬೈಯುತ್ತಾ, ಪಕ್ಕದ ಸೂಪರ್ ಮಾರ್ಕೆಟ್‌ಗಳಲ್ಲಿ ಚಿಲ್ಲಿ, ಟಮೋಟೋ ಸಾಸ್‌ಗಳನ್ನು ಮೂವತ್ತು ನಲವತ್ತು ರೂಗಳಿಗೆ ಕೊಂಡು ಚಪ್ಪರಿಸುತ್ತಾರೆ. ಫುಕುವೊಕರ `ವನ್ ಸ್ಟ್ರಾ ರೆವಲ್ಯೂಷನ್` ಸುಭಾಷ್ ಪಾಳೇಕರರ ಶೂನ್ಯ ಕೃಷಿಯ ಕುರಿತು ಓದುವಾಗ ಈ ಭೂಮಿಯ ಬಗ್ಗೆ ಅಪಾರ ಕಾಳಜಿ ವ್ಯಕ್ತಪಡಿಸುತ್ತಾರೆ. ಇಲ್ಲಿನ ಬಡ ರೈತ ಟಮೋಟೊಗೆ ಬೆಲೆ ಇಲ್ಲ, ಮೆಣಸಿನಕಾಯಿಗೆ ಬೆಲೆ ಇಲ್ಲ ಎಂದು ರಸ್ತೆಗೆ ಸರಿದು ಪ್ರತಿಭಟಿಸುತ್ತಾರೆ. ನೈಸರ್ಗಿಕ ಕೃಷಿಯ ಮಾತು ಇಲ್ಲಿಗೆ ಮುಗಿದು ಹೋಗುತ್ತದೆ.
ಕೆಂಡಸಂಪಿಗೆ ಇಂದಾ ಆಯ್ದು ಕೊಂಡ ಲೇಖನ
(ಪುಕುವೋಕಾ ರ ಬಗೆಗೆ ಕೃಷಿಕರಿಗೆ ವಿಷಯ ತಿಳಿಸಲು ಕೆಂಡಸಂಪಿಗೆಯಿಂದ ಪೂರ್ವಾನುಮತಿ
ಇಲ್ಲದೇ ಲೇಖನವನ್ನು ಆಯ್ದು ಕೊಳ್ಳಲಾಗಿದೆ.ಆಕ್ಷೇಪ ಇದ್ದಲ್ಲಿ ತಿಳಿಸುವದು.)

1 comment:

  1. ಪುಕವೊಕಾ ರ ಬಗ್ಗೆ ಬರದಿದ್ದು ಚನ್ನಾಗಿದೆ.ಆದರೆ ರಾಸಾಯನಿಕ ಗೊಬ್ಬರಗಳು ಅಂತಾ ವಿಷವೇನಲ್ಲ.(ಅತಿಯಾದರೆ ಅಮೃತವೂ ವಿಷ-ಎಂದು ಗಾದೆ ಇದೆ). ಸಾವಯವದಲ್ಲಿ ಕಾಫಿ ಬೆಳೆಯುತ್ತಿದ್ದ ನಮ್ಮೂರ ಇಬ್ಬರು ಕೃಷಿಕರು ಅದನ್ನು ಕೈ ಬಿಟ್ಟು ರಾಸಾಯನಿಕ ಗೊಬ್ಬರ ಬಳಸಲು ಶುರುಮಾಡಿದ್ದಾರೆ. ರಾಸಾಯನಿಕ ಗೊಬ್ಬರಕ್ಕೆ ಕೇಂದ್ರ ಸರಕಾರ ಕೊಡುವ ಸಬ್ಸಿಡಿ ಕಡಿಮೆ ಮಾಡಿದರೆ ಸಾವಯವ ಕೃಷಿ ಕಡೆ ಹೆಚ್ಚಿನ ಜನರು ತಿರಗಬಹುದು.

    ReplyDelete