Monday, November 30, 2009

ಒಂದು ಗಿರಗಿಟ್ಟಿಯ ಸುತ್ತ.



ನನ್ನ ಬಾಲ್ಯದಲ್ಲಿ ಶಾಲೆಗೆ ಹೋಗುವಾಗ ಕಾಡು ದಾಟಿ ಹೋಗಬೇಕಿತ್ತು.ಕಾಡೆಂದರೆ ಕೇಳಬೇಕೇ?ಅದು ಎಲ್ಲಾ ಕಾಡಿನಂತೆ ಸಮೃದ್ಧವಾಗಿತ್ತು.ಅಲ್ಲಿ ನಾನು ನೆಲಕ್ಕೆ ಬಾಗಿದ ಮರದ ಮೇಲೆ ಆಡಿದ ಕಪಿ ಚೇಷ್ಟೆ,ಹಪ್ಪು ಹುಳಿಯಾದ ಹಲಿಗೆ ಹಣ್ಣನ್ನು ಉಪ್ಪು ಹಚ್ಚಿತಿಂದಿದ್ದು, ಗುಡ್ದೆಗೇರು ಒಣಗುವ ಮೊದಲೇ ತಿಂದು ಬಾಯಿ ಸುಟ್ಟಿಕೊಂಡಿದ್ದು,ದಾರಿಯಲ್ಲಿ ಹೋಗುವಾಗ ಕಾಸರಕ ಗಿಡದ ಮುಳ್ಳು ಜೊತೆಗೆ ಅದರದೇ ಒಂದು ಎಲೆಯಿಂದ ಮಾಡಿದ ಗಿರಗಿಟ್ಟಿ ಆಟ ಹೀಗೆ ಇನ್ನೂ ಹಲವು ನನಗೆ ನೆನಪಿದೆ.


ಹೀಗೆಯೇ ದಿನಗಳು ಕಳೆಯುತ್ತಿದ್ದವು.ಕಾಡು ದಾರಿಯಲ್ಲಿ ಆಡುತ್ತ ಪಾಠ ಕಲಿಯುತ್ತಿದ್ದಾಗ ಒಂದು ದಿನ ಊರ ಜನರು "ಇಲ್ಲಿ ಫಾರೆಸ್ಟ್ ನವರು ನರ್ಸರಿ ಮಾಡ್ತಾರಂತೆ ಗಿಡ ಹೊತ್ಗಂಡು ಟ್ರಾಕ್ಟರ್ ಬಂದಿದೆ"ಅಂದಾಗ ನಾವೆಲ್ಲರೂ ಅಲ್ಲಿಗೆ ಓಟ ಓಡಿದ್ದೇ. ನೋಡ ನೋಡುತ್ತಿದಂತೆ ಇಲಾಖೆಯವರು ಹೆಚ್ಚು ಸಂಬಳ ಕೊಟ್ಟು ಊರವರಿಂದಲೇ ಗಿಡ ನೆಡೆಸಿಯೇಬಿಟ್ಟರು..ಇಲಾಖೆಯ ನೆಡುತೋಪು ಅಂದರೆ ಕೇಳಬೇಕೇ?.ಸರಿ. ಸಾಲು ಸಾಲಾಗಿ ಗಿಡನೆಡಲು ಅಡ್ಡಬರುವ ಮರಗಿಡಗಳನ್ನು ಅಡ್ದುದ್ದ ಕೊಯ್ದಾಯ್ತು.ಜನರೂ ಕತ್ತಿಗಳನ್ನು ಹಿಡಿದು ತಮ್ಮಕೈಲಾದ ಗಿಡಗಳನ್ನು ಕಡಿದರು.ಎಕ್ಸೇಲಟರ ಒತ್ತಿದ್ದಕ್ಕೆ ಲಾರಿಗಳು ಹೊಗೆ ಕಕ್ಕುತ್ತ ಆರ್ಭಟಿಸುತ್ತ ಹಸಿಮರಹೊತ್ತುಕೊಂಡು ಹೊಗುವ ಹೊತ್ತಿನಲ್ಲಿ ಗೂಡು ಕಳೆದುಕೊಂಡ ಹಕ್ಕಿಗಳ ಕೂಗು ಯಾರಿಗೆ ತಾನೇ ಕೇಳೀತು?ಆ ಹೊತ್ತಿಗಾಗಲೆ ನಾವು ಕೂಡ ಬಹುಪಾಲು ಗಿರಗಿಟ್ಟಿಮಾಡುವ ಗಿಡ ಮರಗಳನ್ನೂ ಕಳೆದು ಕೊಂಡಾಗಿತ್ತು!.


ನಾವು ಶಾಲೆ ಮಕ್ಕಳು ಅಕೆಸಿಯಾ,ಸಾಗವಾನಿ ಗಿಡಗಳ ಕೆಳಕ್ಕೆ ಬಿದ್ದ ಪಾಲಿಥೀನ್ ಬ್ಯಾಗ್ ಗಳಲ್ಲಿ ನಮ್ಮ ಪಠ್ಯಗಳನ್ನು ತುಂಬಿಕೊಂಡು ಹೆಮ್ಮೆಯಿಂದ ಗಿಡಗಳನ್ನು ನೋಡುತ್ತ ಶಾಲೆಯದಾರಿ ಸವೆಸುತ್ತಿದ್ದವು. ವರ್ಷಗಳು ಆದಂತೆಯೇ ತಮ್ಮ ಬೇರುಗಳನ್ನುಅರಣ್ಯ ಇಲಾಖೆಯ ಮರಗಳು ನೆಲದಾಳಕ್ಕೆ ಇಳಿಸಾಗಿತ್ತು.ಅಂದು ಕಾಡನಡುವೆ ಹರಿವ ತೊರೆಯುಲ್ಲಿ ಕಾಗದದ ದೋಣಿತೇಲಿ ಬಿಟ್ಟಿದ್ದ ಜಾಗ ಈಗ ಹಿಂಗದ ಗಿಡದ ನೀರ ದಾಹಕ್ಕೆ ಮರೆಯಾಗಿದೆ.ಅದೇ ಪಕ್ಕದ ಜಾಗದಲ್ಲಿಗಂಟಲನೋವಿಗೆ ಔಷಧಕ್ಕೆ ಬರುವ ಕಾಡು ಕಂಚಿಗಿಡ ಮಾದು ಹೋಗಿದೆ.ಮಂಕರಿ ಬುಟ್ಟಿ ಮಾಡಲು ಬರುತ್ತಿದ್ದ ಕೂಗಲಬಳ್ಳಿಯೂ ಶಿವಣೆ ಮರದ ಸಮೇತ ಇಲ್ಲವಾಗಿದೆ.ಕಳೆದ ಏಳೆಂಟು ವರ್ಷಗಳ ತನಕ ಅಪರೂಪಕ್ಕೆ ರಾತ್ರಿವೇಳೆ ಕೇಳಿಬರುತ್ತಿದ್ದ ಹುಲಿಯ ಕೂಗು ಇತ್ತಿಚಿಗೆ ಮೌನವಾಗಿದೆ. ಮದ್ದು ಕೊಡುವ ತುದಿಮನೆಅಜ್ಜ ಈಗ ಹಲುಬುತ್ತ ಎಂದೋ ಕಂಡ ಗಿಡ ಹುಡುಕಲು ಅಕೇಸಿಯಾ ಕುಂಬ್ರಿ ಸುತ್ತುತ್ತಿದ್ದಾನೆ.ನೀರ ಹೊಂಡದ ಬಳಿ ಹುಲಿಯಾ ಸಿದ್ದಿ ಬೇಟೆ ಆಡಿದ ಜಾಗ ಈಗ ಕೆಂಪುಕಲ್ಲು ಕ್ವಾರೆ ಆಗಿದೆ.ಅಳಿದುಳಿದ ಕಾಡಿನ ಮೂಲ ಇಂದು ಸರಕಾರದ ಯೋಜನೆ,ಕೃಷಿಗೆ,ಕಟ್ಟಿಗೆ,ಪೀಠೋಪಕರಣಪ ಹೀಗೆ ಒಂದೊದು ಕಾರಣಕ್ಕೆ ಕರಗುತ್ತಿದೆ.ಕಾಡಿನ ವಿಸ್ಮಯ ತಿಳಿಯದ ನಮ್ಮ ಮಕ್ಕಳು ಕಾಡಿನಿಂದ ದೂರವಾಗಿದ್ದಾರೆ.ಪ್ಲಾಸ್ಟಿಕ್ಕಿನ ಮಾಯೆಯಿಂದ ನಾವೂ ಕೂಡಾ ಕಾಡಿನಿಂದ ದೂರವಾಗುತ್ತಿದ್ದೆವೆ. ಒಂದುಕಾಲದಲ್ಲಿ ಕಾಡ ಎಲೆಯ ಗಿರಿಗಿಟ್ಟಿ ಆಡುತ್ತಿದ್ದ ಮಕ್ಕಳು ಇಂದು ಮೊಬೈಲ್,ಕಂಪ್ಯೂಟರ್ ಆಡುತ್ತಿದ್ದಾರೆ.ಅರಣ್ಯನಿಜಕ್ಕೂ ರೋದನವಾಗಿದೆ.
( ಇಲ್ಲಿ ಹೊಸ ತಲೆಮಾರಿನ ಪೀಳಿಗೆಯಮೇಲೆ ಆಕ್ಷೇಪ ಮಾಡುತ್ತಿಲ್ಲ ನಾನು ಮಾಡಿದ್ದು ಒಂದು ಹಿನ್ನೋಟ ಅಷ್ಟೆ.)

1 comment:

  1. illi akeshiya marada kaata ashtilla. namma jilleyalli avara plantationgalu illa. pakkada thirthahalliyallide.

    akeshiya beleyuva jaagadalli ondu hullu huttudilla

    ReplyDelete