Sunday, July 11, 2010

ಕೊನೆ.


ಕೆ.ಸತ್ಯನಾರಾಯಣ, ಗೋಕರ್ಣ ಇವರು ಬರೆದ ಕಥೆಯನ್ನು
೧೧/೦೭/೨೦೧೦ ರಂದು ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಕಥೆಯು ತಿಂಗಳ ಓದಿಗೆ ಸೇರಿಸಲಾಗಿದೆ.


ನೆಲದಲ್ಲಿ ಬಿತ್ತಿದ ಬೀಜ. ಕಾಲದಲ್ಲಿ ಮೊಳೆತು ಮೇಲೆ ಬರುತ್ತದೆ. ಸಕಾಲದ ಕೃಷಿ. ನಿರಂತರ ನೀರು, ಗೊಬ್ಬರ. ಬೆಳೆದು ಮರವಾದ ಹಸಿರ ಗರ್ಭ... ಹೂವಿನಂತೆ ಹಣ್ಣೂ ಕಾಲದಕೊಡುಗೆ. ಮಾಗಿದ ಕಾಯಿ ಹಣ್ಣಾಗಿ ಮರದಿಂದ ಕೆಳಗೆ ಬೀಳುತ್ತದೆ. ಹಾಗೆಂದು ಹೀಚು ಕಾಯಿ, ಮೊಗ್ಗೂ ಸಹ ಉದುರಿಹೋಗುವುದುಂಟು. ಅದು ಬೆಳೆದವನ ಭಾಗ್ಯ. ಕಳೆಯುವವರಿಗಾಗಿಲ್ಲದ ಕಾಲ ಬೆಳೆಯುವವರ ಕೈಯ್ಯಾಸರೆ...

ಬೆಳಿಗ್ಗೆಯ ತಿಂಡಿ ತಿಂದು ಜಗುಲಿಯ ಕಾಲುಮಣೆಯ ಮೇಲೆ ಕುಳಿತು ಎಲೆಯಡಿಕೆ ಮೆಲ್ಲುತ್ತಿದ್ದ ಶಂಕರಭಟ್ಟರ ಕಣ್ಣಮುಂದೆ ಮಾಡಲು ಬಾಕಿಯಿರುವ ಕೆಲಸಗಳ ಸಂತೆ. ಮೊಮ್ಮಗನ ಉಪನಯನಕ್ಕೆ ಉಳಿದಿರುವುದು ಕೇವಲ ಐದಾರು ದಿನವಷ್ಟೇ. ಅಂಗಳದಲ್ಲಿ ಚಪ್ಪರಕ್ಕೆಂದು ತಂದು ಹಾಕಿದ್ದ ಬಿದಿರು, ಗಳ, ತೆಂಗಿನ ಮಡಲುಗಳು. ಪಕ್ಕದಲ್ಲಿ ಒಣಸೌದೆಯ ರಾಶಿ.

ಬೇಕೆಂದರೂ ಕಣ್ಣಿಗೆ ಬೀಳದ ಕೆಲಸದಾಳುಗಳು. “ಅಯ್ಯ, ಚಿಂತೆ ಬಿಡಿ. ಮುಂಜಿ ಮನೆಗೆ ಗಡದ್ದು ಚಪ್ಪರ ಹಾಕಿಕೊಟ್ಟರಾಯ್ತಲೆ? ನಾಕಾಳು ತಂದು ಒಂದೇ ದಿನದಲ್ಲಿ ಹುಡಿ ಹಾರಸ್ತೆ ಕಾಣಿ’’ ಎಂದು ದುಡ್ಡು ತೆಗೆದುಕೊಂಡು ಹೋದ ಮಂಜ ಕಣ್ಣಿಗೆ ಬೀಳದೆ ನಾಲ್ಕು ದಿನಗಳೇ ಕಳೆದುಹೋಗಿವೆ. ಕೊಟ್ಟಮಾತನ್ನು ಉಳಿಸಿಕೊಳ್ಳದ ನಿಯತ್ತಿಲ್ಲದ ಜನ, ಕೇಳಿದಷ್ಟು ಕೊಟ್ಟರೂ ಅವರಿಗೆ ಸವುಡಾದಾಗ ಕೆಲಸ. ಯಾಕಾದರೂ ಬೇಕು? ವ್ಯವಸ್ಥೆಯು ಕಲ್ಪಿಸಿದ ಸೌಲಭ್ಯ. ಹೊಟ್ಟೆಯೊಂದರ ರಗಳೆ ಮುಗಿದರೆ ತೀರಿತು. ಅಲ್ಪತೃಪ್ತರಿಗೆ ಆಕಾಶದ ಕನಸಾದರೂ ಬೀಳುವುದು ಹೇಗೆ... ಅಂದಿಗಂದಿಗೆ ಮುಗಿಯು ಲೆಕ್ಕಾಚಾರ...

ಮಗ-ಸೊಸೆ ಉಪನಯನದ ಹೇಳಿಕೆಗೆಂದು ನಂಟರ ಮನೆಗೆ ಹೋದವರು ಬರುವುದು ನಾಳೆ. ಪುರೋಹಿತರಿಗೆ ಅಡಿಗೆಯವರಿಗೆ ತಿಳಿಸಿದ್ದಾಗಿದೆ. ಅವರದ್ದೇನೂ ತೊಂದರೆಯಾಗದು ಎಂದುಕೊಳ್ಳುವಷ್ಟರಲ್ಲಿ ಕೊಟ್ಟಿಗೆಯಲ್ಲಿ ಕೂಗುತ್ತ ತನ್ನನ್ನು ಮೇಯಲು ಬಿಡುವ ವೇಳೆಯಾಯಿತೆಂದು ಎನ್ನುವ ನಂದಿನಿ. ಮರೆತೆನಲ್ಲ... ಮಗಳೇ... ಎನ್ನುತ್ತ ಕೊಟ್ಟಿಗೆಯತ್ತ ನಡೆದ ಭಟ್ಟರು ತಡವಾಗಿ ಹೋಯ್ತು ಎಂದುಕೊಳ್ಳುತ್ತ ಹಸುವಿನ ಮೈನೇವರಿಸಿ ಲಲ್ಲೆರೆಯುತ್ತಿದ್ದಂತೆ ಮುಖವನ್ನು ಅವರ ಭುಜದ ಮೇಲಿಟ್ಟು ಅವರ ಮಾತನ್ನು ಆಲಿಸುವ ನಂದಿನಿ. ಭಟ್ಟರ ಈ ಏಕಮುಖ ಸಂಭಾಷಣೆಯನ್ನು ಕೇಳಿದವರು ಈ ಮನುಷ್ಯ ಸರಿಯಿದ್ದಾನೋ ಎಂದು ಸಂಶಯಪಡುವಷ್ಟು ಅನ್ಯೋನ್ಯತೆ ಮೂಕಪ್ರಾಣಿಯ ಜೊತೆ. ಪ್ರೀತಿಗೆ ಭಾಷೆಯ ಕಟ್ಟಿಲ್ಲ. ಹೃದಯಗಳ ಬೆಸುಗೆಗೆ ಅದು ಬೇಡದ ಸಾಮಗ್ರಿ. ಹಸುವಿನ ಕೊರಳಕಣ್ಣಿಯನ್ನು ಬಿಚ್ಚಿ ಮೇಯಲೆಂದು ಹೊರಗೆ ಬಿಟ್ಟು ಹಿಂದಿರುಗುವಾಗ ಮನೆಯೆದುರಿನ ಹೊಸ ಅಡಿಕೆತೋಟ ಕಣ್ಣಿಗೆ ಬಿದ್ದದ್ದೇ ಫಕ್ಕನೆ ಕೊನೆತಿಮ್ಮನ ನೆನಪು. ನಿನ್ನೆ ಸಂಜೆಯಲ್ಲವೇ ಅವನು ಬಂದದ್ದು, ಹಸುವಿಗೆ ಹುಲ್ಲುಹಾಕಿ ಕೊಟ್ಟಿಗೆಯಿಂದ ವಾಪಸು ಬರುವಾಗ ಅಂಗಳದಲ್ಲಿ ನಿಂತ ಅವನನ್ನು. ನೋಡಿದ್ದು. ಆವರಿಸುತ್ತಿದ್ದ ಮಬ್ಬುಗತ್ತಲಿನಲ್ಲಿ ನಿಂತ ಅಸ್ಪಷ್ಟ ಆಕೃತಿ. ಹೆಗಲಮೇಲೊಂದು ಕಂಬಳಿಯೋ... ಮತ್ತೊಂದೋ.. ಇದ್ದ ಹಾಗಿತ್ತು. ಯಾರದು? ಎಂಬ ಭಟ್ಟರ ಪ್ರಶ್ನೆಗೆ “ನಾನು, ನಾಳೆ ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಬರ್ತೇನೆ ತಯಾರಿರಿ ಅಯ್ಯ” ಎಂದು ಹೇಳಿ ಕತ್ತಲಲ್ಲಿ ಕರಗಿಹೋಗಿದ್ದ. ಅದು ತಿಮ್ಮನದೇ ಧ್ವನಿಯಾಗಿತ್ತಲ್ಲವೇ..?

ಅವನಲ್ಲದೆ ಮತ್ತಾರು ಬರಲು ಸಾಧ್ಯ? ಅಡಿಕೆಕೊನೆ ಕೆಲಸ ಮಾಡುವವರು ತಿಮ್ಮನನ್ನು ಬಿಟ್ಟರೆ ಮತ್ತಾರಿದ್ದಾರೆ... ಆದರೆ ಕೊನೆಕೊಯ್ಲು ಕಾರ್ತಿಕ ಮಾಸದಲ್ಲಿಯೇ ಮುಗಿದುಹೋಗಿದೆ. ಈ ವೈಶಾಖದಲ್ಲಿ ಇವನು ಯಾಕೆ ಬಂದ ಅನ್ನಿಸಿದರೂ ತಕ್ಷಣ ಹದಿನೈದು ದಿನಗಳ ಹಿಂದೆ ತಾವೇ ಅವನನ್ನು ಬರಹೇಳಿದ್ದು ನೆನಪಾಗಿತ್ತು. ಒಳ್ಳೆಯ ಅಡಿಕೆ ಸಸಿಯಿಲ್ಲದೆ ಕಳೆದವರ್ಷ ಹೊಸ ತೋಟದಲ್ಲಿ ಸಸಿಯನ್ನೇ ನೆಟ್ಟಿರಲಿಲ್ಲ. ಉದ್ರೆಯ ಮಂಜಣ್ಣನ ಮನೆಯ ಶ್ರಾದ್ಧಕ್ಕೆಂದು ಹೋಗಿದ್ದಾಗ ಸಹಜವಾಗಿಯೇ ಮಾತಿನಮಧ್ಯೆ ಮಾಡಿದ ಪ್ರಸ್ತಾಪ. ಅಲ್ಲಿಯೇ ಇದ್ದ ಹೊಸೂರಿನ ಗುರುಮೂರ್ತಿ “ಭಟ್ರೆ ಯೋಚ್ನೆ ಮಾಡಡಿ, ಎರಡು ವರ್ಷದ ಒಳ್ಳೆ ಅಡಿಕೆ ಸಸಿ. ಒಂದೊಂದು ಗಣ್ಣು ಹತ್ತಿದ್ದು ಯಂದೇ ಇದ್ದು. ನಿಮಗೆ ಎಷ್ಟು ಬೇಕು ಹೇಳಿ. ಬೇರೆಯವರಿಗೆ ಸಸಿಗೆ ಹನ್ನೆರಡರಂತೆ ಮಾರಿದ್ದೆ. ನೀವು ಹತ್ರೂಪಾಯಂತೆ ಕೊಡಿ’’ ಎಂದು ಹೇಳಿ ಮುಂಗಡವಾಗಿ ಐನೂರು ರೂಪಾಯಿ ತೆಗೆದುಕೊಂಡು ಹೋದವನು ನಂತರ ಕಣ್ಣಿಗೇ ಬಿದ್ದಿರಲಿಲ್ಲ. ಇಷ್ಟೆಲ್ಲ ನಡೆಯುವಾಗ ಛಳಿಬಿದ್ದು ಸಸಿನೆಡುವ ಶ್ರಾಯವೇ ಮುಗಿದು ಹೋಗಿತ್ತು. ಈ ವರ್ಷ ಯಾರ ಹಂಗೂ ಬೇಡ, ನಂಬಿಕೆಯೂ ಬೇಡ ಎಂದುಕೊಂಡು ಮನೆಯಲ್ಲಿಯೇ ಸಸಿ ಮಾಡಲಿಕ್ಕೆಂದು ಹಳೆಯ ತೋಟದಲ್ಲಿದ್ದ ಒಳ್ಳೆಯ ಬೀಜವಾರಿ ಅಡಿಕೆಮರವನ್ನು ಆರಿಸಿ ಅಡಿಕೆಕೊನೆಯನ್ನು ಕೊಯ್ಸದೆ ಬೀಜಕ್ಕೆಂದು ಹಾಗೆಯೇ ಬಿಡಿಸಿದ್ದರು. ಈಗ ಬೀಜದ ಅಡಿಕೆ ಬಲಿತು ಹಣ್ಣಾಗಿ ಉದುರುವ ಹಂತಕ್ಕೆ ಬಂದಿತ್ತು. ಆದಷ್ಟು ಬೇಗ ಕೊನೆ ತೆಗೆಸಿ ಸಸಿಮುಡಿ ಮಾಡಬೇಕೆಂದು ತಿಮ್ಮನಿಗೆ ಬರಲು ಹೇಳಿದ್ದರು.

ಹೊತ್ತಲ್ಲದ ಹೊತ್ತಲ್ಲಿ ಅವಳ್ಯಾರೋ ಅದೇನೋ ಆದಂತೆ ಈ ಮುಂಜಿಯ ಗಡಿಬಿಡಿಯಲ್ಲಿಯೇ ತಿಮ್ಮ ಕೊನೆಕೊಯ್ಯಲು ಬರುತ್ತೇನೆ ಎನ್ನುತ್ತಾನಲ್ಲ ಎನಿಸಿ ಅದನ್ನು ಅವನಿಗೆ ಹೇಳುವಷ್ಟರಲ್ಲಿ ಅವನು ಕಣ್ಣಿಗೆ ಕಾಣದಾಗಿದ್ದ. ಏನದರಾಗಲಿ, ಅವನು ಬಂದಾಗ ಕೊನೆಯನ್ನು ಕೊಯ್ಸಿಬಿಡಬೇಕು, ಇಲ್ಲವಾದರೆ ಬೀಜದ ಅಡಿಕೆಯೆಲ್ಲ ಉದುರಿ ಹಾಳಾಗಿಹೋಗುತ್ತದೆ ಎಂದುಕೊಂಡವರು ಕೊಟ್ಟಿಗೆಯನ್ನು ಸ್ವಚ್ಛಗೊಳಿಸತೊಡಗಿದರು. ತಿನ್ನಲು ಹಾಕಿದ್ದ ಹುಲ್ಲನ್ನು ಧಾರಾಳವಾಗಿ ಕಾಲಡಿಗೆ ಎಳೆದುಕೊಂಡು ಮಲಗಿದ್ದ ಹಸು. ಈ ನಂದಿನಿ ತಿನ್ನುವುದಕ್ಕಿಂತ ಹಾಳು ಮಾಡೋದು ಜಾಸ್ತಿ. ಹುಲ್ಲಿನ ಧಾರಣೆಯಾದರೂ ಗೊತ್ತಾ ಅವಳಿಗೆ ಅನ್ನಿಸಿ ಮೂಕಪ್ರಾಣಿಯ ಪ್ರಜ್ಞಾವಂತಿಕೆಯನ್ನು ವಿಮರ್ಶಿಸುವ ತಮ್ಮ ಮೂರ್ಖತನಕ್ಕೆ ತಮ್ಮೊಳಗೇ ನಕ್ಕರು.

ತಿಮ್ಮ ಬರುತ್ತೇನೆಂದು ಹೇಳಿದ್ದು ಹನ್ನೊಂದು ಘಂಟೆಗಲ್ಲವೇ? ಈಗ ತೋಟಕ್ಕೆ ಹೋಗಿ ಒಂದು ಸುತ್ತು ಹಾಕುವಷ್ಟರಲ್ಲಿ ಅವನು ಅಲ್ಲಗೇ ಬರುತ್ತಾನೆ. ಹಾಗೆಯೇ ಬೀಜದ ಕೊನೆಯಿಳಿಸಿಕೊಂಡು ಬಂದರೆ ಸರಿ ಎನ್ನಿಸುವಾಗ ಅಸಲಿಗೆ ನಿನ್ನೆ ಸಂಜೆ ಬಂದವನು ತಿಮ್ಮನೇ ಹೌದೋ ಅಲ್ಲವೋ ಎಂಬ ಸಂಶಯವೂ ಮೂಡತೊಡಗಿತು. ಸಂಜೆಗತ್ತಲು, ಮುಖಬೇರೆ ಸರಿಯಾಗಿ ತೋರುತ್ತಿರಲಿಲ್ಲ. ಹೆಗಲಮೇಲೊಂದು ಕಂಬಳಿ. ಜೊತೆಗೆ ತೋಳಲ್ಲಿ ಸುರುಳಿಸುತ್ತಿದ ಹಗ್ಗದಸಿಂಬಿಯೊಂದು ಇದ್ದ ಹಾಗಿತ್ತು. ಆದರೆ ತಿಮ್ಮ ಹಗ್ಗವನ್ನು ಹಿಡಿದು ಓಡಾಡುವವನಲ್ಲ. ಕೈಯ್ಯಲ್ಲಿ ಪುಂಡಿನಾರು ಹಿಡಿದು ಸಮಯ ಸಿಕ್ಕಾಗಲೆಲ್ಲ ಮಾತಾಡುತ್ತಲೇ ಹಗ್ಗವನ್ನು ಹೊಸೆಯುವ ನಮ್ಮೂರಿನ ನಾಗಾನಾಯ್ಕನ ಹಾಗೆ ಇವನೂ ಹಗ್ಗಹೊಸೆಯುತ್ತಿದ್ದನಾ...? ಅಥವಾ ಕೊನೆಯಿಳಿಸುವ ನೇಣಿನ ಹಗ್ಗವನ್ನು ತಂದಿದ್ದನೋ ಏನೋ ಎಂದುಕೊಳ್ಳುತ್ತಿದ್ದಂತೆಯೇ ಭಟ್ಟರನ್ನು ಕಾಲುಗಳು ಯಾಂತ್ರಿಕವಾಗಿ ಮನೆಯೆದುರಿನ ಅಡಿಕೆ ತೋಟಕ್ಕಿಳಿಸಿದವು.

ಹಸಿರುಕ್ಕಿಸುವ ಅಡಿಕೆತೋಟ, ಬೆವರಹನಿಯನ್ನುಂಡೇ ಬೆಳೆದು ನೋಡುವ ಕಣ್ಣನ್ನು ತುಂಬಿಸುತ್ತದೆ. ಖಾಲಿಯಿದ್ದ ಗದ್ದೆಯನ್ನು ತೋಟದ ರೂಪಕ್ಕೆ ತರಲು ಪಟ್ಟಪರಿಶ್ರಮವೆಷ್ಟು? ಮನಸ್ಸಿನಲ್ಲಿ ಹತ್ತುವರ್ಷದ ಹಿಂದೆ ನಡೆದ ಘಟನೆಗಳ ಚಿತ್ರಮಾಲೆ. ಹಳೆಯ ತಳಪಾಯದ ಹೊಸಸ್ಮರಣೆ. ಮಳೆಗಾಲದ ಪ್ರಾರಂಭ, ಊರಲ್ಲಿಯೇ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದ ಘಟ್ಟದ ಕೆಳಗಿನ ನಂದಿಶೆಟ್ಟಿ “ಅಯ್ಯ, ಮಳೆಗಾಲ. ತೋಟದ ಕೆಲಸವೂ ಇಲ್ಲ ಕಾಣಿ. ನಿಮ್ಮ ಗದ್ದೆಯನ್ನು ಪಾಲಿಗೆ ಮಾಡ್ತೆ. ಮಕ್ಕಳೊಂದಿಗ. ಇಲ್ಲ ಅಂಬೂಕಾಗ ಒಡೆಯ’’ ಅಂತ ಅಂಗಲಾಚಿದ. ಇರುವ ಒಂದೆಕರೆ ಗದ್ದೆಯ ಬೇಸಾಯಕ್ಕೆ ಎತ್ತು, ನೇಗಿಲು, ನಾಟಿ ಎಂದು ಒದ್ದಾಡುವುದಕ್ಕಿಂತ ಇದೇ ವಾಸಿ. ಸರಿಯಾಗಿ ಮಾಡಿದರೆ ಬೇಸಾಯ ಮಾಡಿಕೊಳ್ಳಲಿ. ಕಡೆಗೂ ನಮಗೆ ಬೇಕಾಗೋದು ಎಲ್ಲರ ಹಾಗೆ ಆರಡಿ-ಮೂರಡಿಯೇ ತಾನೆ ಅಂದುಕೊಂಡು ಪಾಲಿಗೆ ಕೊಟ್ಟಿದ್ದು. ಗದ್ದೆಯ ಮೇಲ್ಭಾಗದಲ್ಲಿಯೇ ಸಣ್ಣಗುಡಿಸಲನ್ನೂ ಹಾಕಿಕೊಂಡು ಉಳಿದ. ಎರಡು ವರ್ಷ ಸರಿಯಾಗಿಯೇ ಕೃಷಿ ಮಾಡಿದ. ಮೂರನೇ ವರ್ಷ ತನ್ನನ್ನು ಕೇಳದೆಯೇ ನಾಟಿಕೆಲಸ ಮುಗಿಸಿದ. ಕಂಡಾಗ ಅವನ ರೀತಿ, ನೀತಿಗಳೂ ಸಹ ಬೇರೆಯೇ ಆಗಿ ತೋರತೊಡಗಿತು. ಅಲ್ಲದೆ ಭಟ್ಟರ ಗದ್ದೆಯನ್ನು ಬಿಡೂಕೆ ನಂಗೇನು ಮರ್ಲಾ..? ಎಂದು ಒಬ್ಬಿಬ್ಬರ ಹತ್ತಿರ ಪಿಸುಗುಟ್ಟಿದ್ದೂ ಕಿವಿಗೆ ಬಿತ್ತು. ಇಂತವರ ಹತ್ತಿರ ಘಟ್ಟಿಯಾಗಿ ಮಾತಾಡುವಂತೆಯೂ ಇಲ್ಲ. ಎಲ್ಲ ಒಟ್ಟಾಗಿಬಿಡುವ ಕಾಕಸಮೂಹ. ಹಾರಾಡುವುದು ಆಕಾಶದಲ್ಲೇನೋ ಹೌದು. ಆದರೆ ನೋಟ ಮಾತ್ರ ಕೆಳಗಿರುವ ಕೊಳಚೆಯತ್ತ. ತಪ್ಪೋ ಸರಿಯೋ ಬಾಯಿದ್ದವನದೇ ಬಲ. ಅವನದ್ದೇ ಬದುಕು. ಬೇಟೆಯಾಗುವುದು ಮಾತ್ರ ಒಂಟಿದನಿಯೇ. ಹಾದಿಯಲ್ಲಿ ಹೋಗುವವರ ತಲೆಯನ್ನೊಡೆದಾದರೂ ಸರಿ, ತಾವು ಬದುಕಬೇಕೆಂಬ ಇಂತಹ ಬುದ್ದಿ ಯಾಕಾದರೂ ಬರುತ್ತದೋ ಅನ್ನಿಸಿತ್ತು. ಕಳೆದ ವರ್ಷವಷ್ಟೇ ಕಲ್ಮನೆಯ ಶಾಂತಣ್ಣನ ಮನೆಯಲ್ಲಿ ಆಳೊಬ್ಬ ಹಲಸಿನಕಾಯನ್ನು ಕೊಯ್ದುಕೊಂಡು ಹೋಗಲು ಕುಡಿದು ಮರಹತ್ತಿಬಿದ್ದು ಪೆಟ್ಟುಮಾಡಿಕೊಂಡ. ಅವನ ಹೆಂಡತಿ, ಮಕ್ಕಳು, ಮತ್ತಾವುದೋ ಸಮಿತಿಯವರು ಧರಣಿ ನಡೆಸಿ ಗಲಾಟೆ ಮಾಡಿ ಉಚಿತವಾಗಿ ಕೊಯ್ದುಕೊಂಡು ಹೋಗು ಎಂದ ತಪ್ಪಿಗೆ ಐವ್ವತ್ತುಸಾವಿರ ತೆರುವಂತೆ ಮಾಡಿದ್ದು ಭಟ್ಟರ ಸ್ಮರಣೆಗೆ ಬಂದು ತಕ್ಷಣ ಪಟೇಲರ ಮನೆಗೆ ಓಡಿದ್ದರು. ಅವರ ಮನೆಯ ಶೇರುಗಾರ ಗೋಪು ಶೆಟ್ಟಿಯನ್ನು ಹಿಡಿದು ಪಂಚಾಯ್ತಿಕೆ ಮಾಡಿ ಪಾಲಿಗೆ ಗದ್ದೆ ಮಾಡಲು ಕೊಟ್ಟ ತಪ್ಪಿಗೆ ಹತ್ತುಸಾವಿರ ಕೊಟ್ಟು ಗದ್ದೆಯನ್ನು ಬಿಡಿಸಿಕೊಂಡಿದ್ದರು. ಇನ್ನುಮುಂದೆ ಇಂತಹ ಉಸಾಬರಿಯೇ ಬೇಡವೆಂದು ಆ ವರ್ಷವೇ ಗದ್ದೆಗೆ ಅಡಿಕೆಸಸಿ ತುಂಬಿದ್ದರು. ಇಂದು ವರ್ಷ ಹದಿನೈದು ಕ್ವಿಂಟಾಲು ಅಡಿಕೆ, ವೀಳ್ಯದೆಲೆ, ಕರಿಮೆಣಸು, ಏಲಕ್ಕಿ ಎಲ್ಲದರ ಸಂಗಮ. ಒಂದುಬಾರಿ ತೋಟವನ್ನು ಸುತ್ತಾಡಿದರೆ ಎಂತಹ ಸುಖ, ಎಲ್ಲ ಬೇಗುದಿಯೂ ಮಾಯ.

ಅಡ್ಡಾಡುತ್ತಿದ್ದ ಭಟ್ಟರು ಏಲಕ್ಕಿ ಮುಡಿಯೊಂದರ ಮೇಲೆ ಬಿದ್ದ ಸೋಗೆಯೊಂದನ್ನು ತೆಗೆದು ಹಾಕಿದರು. ನಿತ್ಯದ ಖರ್ಚಿಗೆಂದು ನಾಲ್ಕಾರು ನಿಂಬೆಹಣ್ಣುಗಳನ್ನು ಕೊಯ್ದುಕೊಂಡರು. ತೋಟವನ್ನು ನೋಡುತ್ತಿದ್ದಂತೆ ಇನ್ನೆಷ್ಟು ದಿನವೋ ಈ ಮಣ್ಣಿನ ಋಣ ಎನ್ನಿಸಿತು. ಎಂಜಿನಿಯರ್ ಆಗಿ ಬೆಂಗಳೂರಲ್ಲಿರುವ ಒಬ್ಬನೇ ಮಗ. ಅವನಿಗೆ ಬೇಕಾ ಇದೆಲ್ಲ? ವರ್ಷಕ್ಕೊಮ್ಮೆ ಹೆಂಡತಿ, ಮಕ್ಕಳೊಂದಿಗೆ ಬಂದು ನಾಲ್ಕು ದಿನವಿದ್ದು ಹೋಗುವವ. ನಂತರ ದಿನಕ್ಕೊ ನಾಲ್ಕುದಿನಕ್ಕೋ ಒಮ್ಮೆ ಫೋನ್ ಮಾಡಿದರೆ ಅವನ ಕರ್ತವ್ಯ ಮುಗಿಯಿತು. ಎಲ್ಲವನ್ನೂ ಹೇಳಿ, ಕೇಳಿ ಮಾಡುತ್ತಿದ್ದ ಆಪ್ತ ದೇವಸ್ಥಾನದ ಶಾಮಣ್ಣನೂ ಇತಿಹಾಸಕ್ಕೆ ಸಂದು ಎರಡುವರ್ಷವೇ ಕಳೆದುಹೋಯಿತು. ‘ಶಂಕರೂ, ಈಗಿನ ಕಾಲದಲ್ಲಿ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸೋದು ಅಂದ್ರೆ ಅವರನ್ನ ಶಾಶ್ವತವಾಗಿ ಕಳೆದುಕೊಳ್ಳೋದಷ್ಟೆ’ ಎಂಬ ಅವನ ಮಾತು ಸ್ಮರಣೆಗೆ ಬಂತು. ಹೌದು, ಪ್ರೀತಿಗೆ ಸ್ವಾರ್ಥದ ಬೇಲಿ. ನೆಲದುದ್ದಕ್ಕೂ ಹರಡಿ ಬೆಳೆಯಹೊರಟ ಬಳ್ಳಿಯ ತುದಿಚಿವುಟುವ ಸಲ್ಲದ ಕೆಲಸ. ಬೀಜವನ್ನೇ ನುಂಗುವ ನೆಲ. ಛೇ... ಎಂತಹ ಯೋಚನೆ? ಭಟ್ಟರ ತಲೆಯಲ್ಲಿ ರಥಚಕ್ರದ ಪರಿಭ್ರಮಣ.

ಅರೆ..! ಇಷ್ಟು ಹೊತ್ತಾದರೂ ಕೊನೆತಿಮ್ಮ ಬರಲೇ ಇಲ್ಲವಲ್ಲ. ಇಂದು ಬರುತ್ತಾನೋ ಇಲ್ಲವೋ. ಮನೆಗಾದರು ಹೋಗುವ ಅಂದುಕೊಂಡ ಭಟ್ಟರು ತೋಟದ ದಣಪೆಯನ್ನು ದಾಟುತ್ತಿದ್ದರಷ್ಟೆ. ಏಕೋ ಇದ್ದಕ್ಕಿದ್ದ ಹಾಗೆ ಎದೆಯಲ್ಲಿ ಒಂದುರೀತಿಯ ಛಳಕು. ಮೈಯ್ಯೆಲ್ಲ ಬೆವರು. ವಯಸ್ಸಾಯ್ತಲ್ಲ. ಬಿಸಿಲಲ್ಲಿ ತೋಟವನ್ನು ಸುತ್ತಿದ್ದರ ಪರಿಣಾಮ. ಮನೆಗೆ ಹೋಗಿ ಒಂದು ಘಳಿಗೆ ತಣ್ಣಗೆ ಮಲಗಿದರೆ ಎಲ್ಲ ಸರಿಹೋಗುತ್ತದೆ ಎಂದುಕೊಳ್ಳುತ್ತ ಮನೆಗೆ ಬಂದವರು ರುಕ್ಮಿಣೀ, ಒಂದು ಲೋಟ ಮಜ್ಜಿಗೆ ಕೊಡು. ಯಾಕೋ ತುಂಬ ಬಾಯಾರಿಕೆ ಎನ್ನುತ್ತ ಜಗುಲಿಯಲ್ಲಿ ಅಡ್ಡಾಗಿದ್ದರಷ್ಟೆ. ಹೊರಗೆ ಅಯ್ಯಾ ತಯಾರಾ? ಎಂಬ ತಿಮ್ಮನ ಧ್ವನಿ. ಇಷ್ಟೊತ್ತು ನಿನಗಾಗೇ ತೋಟದಲ್ಲಿ ಕಾದು ವಾಪಸ್ ಬಂದೆನಲ್ಲೋ ಎಂದು ಹೇಳಲು ಬಾಯಿ ತೆರೆದರೆ ಶಬ್ದವೇ ಹೊರಬೀಳುತ್ತಿಲ್ಲ. ಗಂಟಲು ಕಟ್ಟಿ ಮಾತನಾಡಲೂ ಆಗದ ಸ್ಥಿತಿ. ಶರೀರದ ತುಂಬ ಸಾವಿರಚೇಳುಗಳು ಒಮ್ಮೆಗೇ ಕುಟುಕಿದಂತೆ ಯಮಯಾತನೆ. ಭಟ್ಟರ ಕಣ್ಣಿನರೆಪ್ಪೆ ನಿಧಾನವಾಗಿ ಮುಚ್ಚತೊಡಗಿತು.
***
ಉಪನಯನದ ಮನೆಯಂಗಳದಲ್ಲಿ ಚಪ್ಪರಕ್ಕೆಂದು ತಂದ ಬಿದಿರುಗಳ.
ಮಂಟಪದ ಅಲಂಕಾರಕ್ಕೆಂದು ತಂದಿದ್ದ ಬಿಳಿಯಬಟ್ಟೆ.
ಆದರೆ... ಇಷ್ಟೆ... ಜನಿವಾರವನ್ನು ಎಡಕ್ಕೆ ಹಾಕಿಕೊಂಡ ಭಟ್ಟರ ಮಗ. ಪುರೋಹಿತರು ಕೈಯ್ಯಲ್ಲಿ ಹಿಡಿದ ತಟ್ಟೆಯಲ್ಲಿ ಎಳ್ಳು, ದರ್ಭೆ.

2 comments:

  1. ಜಗದೀಶ, ಕಥೆ ಸಾಂದರ್ಭಿಕವಾಗಿದೆ ಹಾಗು ಸೊಗಸಾದ ಕೃಷಿಕರ ಭವಣೆಯ ನಿರೂಪಣೆ.
    ಧನ್ಯವಾದಗಳು.

    ReplyDelete
  2. ಜಿತೇಂದ್ರ ರವರೇ,
    ಈ ಕಥೆ ಓದಿದ ನಂತರ ನನಗೇ ಕೃಷಿ ಬದುಕಿನ ಒಂದು ಭಾಗದ ದುರಂತದಂತೆ ಭಾಸವಾಯಿತು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete