Friday, February 12, 2010

ಆಲೇಮನೆ ಒಂದು ನೆನೆಪು.




ಕಬ್ಬಿನ ಗದ್ದೆಯ ನೆನಪುಗಳು ದಶಕದ ಹಿಂದೆ ಸಾಗುತ್ತದೆ. ಅಂದೆಲ್ಲಾ ಕೋಣನ ಗಾಣದ್ದೇ ಕಾರುಬಾರು.ಊರಲ್ಲೆಲ್ಲಾ "ಹ್ವಾಯ್ .ನಮ್ಮನೆ ಆಲೆಮನೆಗೆ ಮುದ್ದಾಂ ಬರವು.ಕಣೆ ನಿಲ್ಸತ್ತಾಇದ್ದಿ".ಎಂಬ ಕರೆಯುವಿಕೆಸಾಮಾನ್ಯವಾಗಿತ್ತು. ಆಲೆಮನೆ ಅದೊಂದು ಸಂಭ್ರಮ.ಮನೆ ಹಿರಿಯವರಿಗೆ ಕೆಲಸದ ಜವಬ್ದಾರಿಯಲ್ಲಿ ತೊಡಗಿದರೆ ಕಿರಿಯವರಿಗೆ ಸಿಕ್ಕಾಪಟ್ಟೆ ಖುಷಿ. ಹೆಂಗಳೆಯರಿಗೆ ನೆಂಟರಿಷ್ಟರನ್ನು ಕರೆದು ತೋಡ್ದೇವು, ಮಣ್ಣಿ ಕಜ್ಜಾಯ ಮಾಡುವದು ಮಾಮೂಲು.ಈ ದಿನಗಳಲ್ಲಿ ಅಭ್ಯಾಸ ಆಟ ಇವೆಲ್ಲಕ್ಕೂ ಮಕ್ಕಳಿಗೆ ಆಲೆಮನೆಯೇ ರಂಗಸ್ಥಳ. ಆಲೇಮನೆಯಲ್ಲಿ ಮುಂಜಾನೆ ೪:೩೦ ಕ್ಕೇ ಬೆಳಗು.ಲಾಟೀನಿನ ಮಂದಬೆಳಕಲ್ಲಿ ಕೊಪ್ಪರಿಗೆಯಬುಡದಲ್ಲಿ ಬೆಂಕಿಕಾಯಿಸುತ್ತಾ ಮುಂಜಾನೆಯ ಮೊದಲ ಗೆಂಡೆಹಾಲನ್ನು ಕುಡಿಯುವ ಆಹೊತ್ತಿನಲ್ಲಿ ಎಲ್ಲರಿಗೂ ಎನೋ ಗೆದ್ದ ಸಾಧನೆಯ ಹೊಳಪು. ಬೆಲ್ಲಕಾಯುವ ಕೊಪ್ಪರಿಗೆಯಲ್ಲಿ ಬರುವ ಕೊಳೆ ಕಳ್ಳಭಟ್ಟಿ ಮಾಡಿಕೊಳ್ಳುವ ಯೋಚನೆಯಲ್ಲಿ ಕೆಲಸಗಾರರಿದ್ದರೆ ಯಜಮಾನನಿಗೆ ಬೆಲ್ಲದ ಹದಹಿಡಿವ ಆತಂಕ.ಕೊಪ್ಪರಿಗೆ ಇಳಿದ ನಂತರ ಬರುವ ನೊರೆಬೆಲ್ಲ.ಆಹಾ! ಅದರ ಸವಿ.ಬಲ್ಲವರಿಗೇ ಗೊತ್ತು. ಈಗಿನವು ಯಾಂತ್ರೀಕರಣದ ದಿನಗಳು.ಕೃಷಿ ಕಾರ್ಮಿಕರ ಕೊರತೆಯಡುವೆ ರೈತನೂ ಯಾಂತ್ರೀಕರಣಕ್ಕೆ ಅನಿವಾರ್ಯವಾಗಿ ಮೊರೆ ಹೋಗಿದ್ದಾನೆ. ಕಬ್ಬಿನ ಗದ್ದೆಗಳು ಕಡಿಮೆ ಆಗುತ್ತಿದಂತೆ ಕೋಣದ ಗಾಣ ನಿಧಾನವಾಗಿ ತನ್ನ ತಿರುಗುವಿಕೆ ನಿಲ್ಲಿಸುತ್ತಿದೆ ಜೊತೆಗೆ ಕೋಣಕ್ಕೆ ಕಟ್ಟಿದ ಗುಂಬ್ರಿಗೆಜ್ಜೆಯ ನಾದ ಆಲೇಶೆಟ್ಟಿಯ ಹಾಡು ಎಲ್ಲವೂ ಈಗಿನ ಗ್ರೀವ್ಸ,ಲ್ಯಾಂಬೋರ್ಡಿನ್ ಡಿಸೆಲ್ ಇಂಜಿನ್ನಿನ ಅವಾಜಿನಲ್ಲಿ ಮರೆತುಹೋಗುತ್ತಿದೆ. ತನ್ಮೂಲಕ ಕೃಷಿಸಮುದಾಯದ ಒಂದುವ್ಯವಸ್ಥಿತ ಕೊಂಡಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಈಗ ರೈತನಿಗೂಪುರುಸೊತ್ತಿಲ್ಲ.

(ಚಿತ್ರ ಬಾಲಣ್ಣ)

No comments:

Post a Comment